ಕಾರ್ಕಳ ತಾಲೂಕಿನ ಕಾಂತಾವರದ ಕಾಂತೇಶ್ವರ ದೇವಸ್ಥಾನದಲ್ಲಿನ ಉದ್ಭವ ಲಿಂಗದ ಬಣ್ಣವು ದಿನಕ್ಕೆ ಮೂರು ಬಾರಿ ಬದಲಾಗುತ್ತದೆ. ದೇಗುಲದ ಸುಂದರ ದೃಶ್ಯಗಳು ಇಲ್ಲಿದೆ ನೋಡಿ.
ಭಾರತ ದೇಶವು ವೈವಿಧಮಯವಾದ ಆಚಾರ ವಿಚಾರಗಳನ್ನು ಒಳಗೊಂಡಿದೆ ಇಲ್ಲಿನ ಪ್ರತಿ ರಾಜ್ಯದಲ್ಲೂ ಒಂದಲ್ಲ ಒಂದು ರೀತಿಯಾಗಿ ದೇವಸ್ಥಾನಗಳು ತನ್ನದೇ ಆದ ವಿಶೇಷತೆಯಿಂದ ಅಸ್ತಿತ್ವವನ್ನು ಪಡೆದುಕೊಂಡಿರುತ್ತದೆ. ಶಿಲ್ಪ ಕಲೆಗಳ ಬೀಡು ಕರ್ನಾಟಕವು ಅಂತಹ ಅನೇಕ ಪುಣ್ಯ ಕ್ಷೇತ್ರಗಳಿಗೆ ಸಾಕ್ಷಿಯಾಗಿದೆ. ಅಂತಹವುಗಳಲ್ಲಿ ಇಲ್ಲಿನ ಕರಾವಳಿ ಭಾಗದಲ್ಲಿರುವ ಕಾಂತವಾರದ ಕಾಂತೇಶ್ವರ ದೇವಾಲಯವೂ ಒಂದಾಗಿದೆ.ಕರಾವಳಿಯ ಪಶ್ಚಿಮ ಘಟ್ಟದ ತಪ್ಪಲ್ಲಿನಲ್ಲಿ ಪ್ರಕೃತಿ ಸೌಂದರ್ಯದ ನಡುವೆ ಕಂಗೋಳಿಸುತ್ತಿರುವ ಸುಪ್ರಸಿದ್ಧ ಶಿವನ ದೇಗುಲ ಕಾಂತೇಶ್ವರ ದೇವಸ್ಥಾನವು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಾಂತಾವರ ಗ್ರಾಮದಲ್ಲಿದೆ. ಕಾಂತವರದಲ್ಲಿ ಅಂಬರೀಶ ಎಂಬ ಮುನಿ ಇಲ್ಲಿನ ರಾಕ್ಷಸರ ಸಂತಾನವನ್ನು ನಾಶ ಮಾಡಬೇಕೆಂಬ ಕಾರಣದಿಂದ ಮಾಡಿದ ತಪಸ್ಸಿನ ಫಲವಾಗಿ ಶಿವನು ಒಳಿದು ಈ ಗ್ರಾಮದಲ್ಲಿ ನೆಲೆನಿಂತ ಎಂಬ ನಂಬಿಕೆಯಿದೆ. ಜೊತೆಗೆ ಇಲ್ಲಿ ಅಂಬಿಕೆ ಅಂದರೆ ಪಾರ್ವತಿಯೂ ನೆಲೆನಿಂತಿದ್ದಾಳೆ.ಸುತ್ತಲೂ ಕಾಡಿರುವ ಕಾರಣದಿಂದ ಈ ಊರಿಗೆ ಕಾಂತವರ ಎಂಬ ಹೆಸರು ಬಂದಿದೆ ಎಂಬ ಪ್ರತೀತಿಯಿದೆ. ಹಾಗೆಯೇ ಶಾಂತ ಪರಿಸರದ ಕಾನನದ ನಡುವೆ ಪ್ರಕೃತಿ ಸೌಂದರ್ಯದ ಸೊಬಗಿನಲ್ಲಿ ಹೊಳೆಯುತ್ತಿರುವ ಇಲ್ಲಿನ ಶಿವನ ದೇವಸ್ಥಾನಕ್ಕೆ ಕಾಂತೇಶ್ವರ ಎಂಬ ಹೆಸರು ಬಂದಿದೆ ಎನ್ನಲಾಗುತ್ತದೆ. ಹಾಗೆಯೇ ಇಲ್ಲಿ ಶಿವನ ಜೊತೆ ಪಾರ್ವತಿ ಇರುವುದರಿಂದ ಕಾಂತಿಯ ಜೊತೆ ಈಶ್ವರ ಎಂದು ಕಾಂತೇಶ್ವರ ಎಂಬ ಹೆಸರು ಬಂತು ಎನ್ನುತ್ತಾರೆ.ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾದ ಈ ದೇವಸ್ಥಾನದಲ್ಲಿ ಇಲ್ಲಿನ ಪ್ರಮುಖ ದೇವರಾದ ಶಿವನ ಉದ್ಭವ ಲಿಂಗವು ದಿನಕ್ಕೆ ಮೂರು ಬಾರಿ ಅಂದರೆ ಬೆಳಗ್ಗೆ ಮಧ್ಯಾಹ್ನ ಮತ್ತು ಸಂಜೆ ಮೂರು ರೀತಿಯಲ್ಲಿ ಬಣ್ಣ ಬದಲಾಯಿಸುತ್ತದೆ.ಶಿವಲಿಂಗವು ಬೆಳಗ್ಗೆ ಬೆಳ್ಳಿಯ ಬಣ್ಣದಲ್ಲಿ ಕಾಣಿಸಿಕೊಂಡರೆ ಮಧ್ಯಾಹ್ನ ತಾಮ್ರದ ಬಣ್ಣದಲ್ಲಿ ಮತ್ತು ಸಂಜೆಯ ಹೊತ್ತಿನಲ್ಲಿ ಚಿನ್ನದ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತದೆ. ಈ ಲಿಂಗವನ್ನು ಕೆಲವರು ಲೋಹ ಎಂದೂ ಭಾವಿಸಬಹುದು ಆದರೆ ಇದು ಯಾವುದೇ ರೀತಿಯಾದ ಲೋಹವಲ್ಲ ಬದಲಾಗಿ ಉದ್ಭವ ಲಿಂಗವಾಗಿದ್ದು ವಜ್ರಶಿಲೆಯಾಗಿದೆ.
ಈ ದೇವಾಲಯದ ಸಂಕೀರ್ಣವೂ ಅತ್ಯಂತ ಹಳೆದಾಗಿದೆ. ,ಮತ್ತು ಇಲ್ಲಿನ ವಾಸ್ತುಶಿಲ್ಪವು ಕೇರಳದ ಶೈಲಿಯಂತೆ ಕಾಣಿಸಿಕೊಳ್ಳುತ್ತದೆ. ಇಲ್ಲಿಗೆ ನಿಷ್ಕಲ್ಮಶ ಮನಸ್ಸಿನಿಂದ ಬಂದು ಪ್ರಾರ್ಥಿಸಿ ಹೋದ ಭಕ್ತರಿಗೆ ಯಾವುದೇ ರೀತಿಯಾದ ನಿರಾಸೆಯಾಗಿಲ್ಲ ಎಂದು ಇಲ್ಲಿನ ಜನ ಹೇಳುತ್ತಾರೆ.ಈ ದೆವಾಲಯದ ಸುತ್ತಲೂ ಶಾಂತ ಮತ್ತು ತಂಪಾದ ಪರಿಸರವಿದ್ದು ಭಕ್ತರಿಗೆ ನೆಮ್ಮದಿಯ ನೆಲೆಯಾಗಿದೆ. ದೇಗುಲದ ಸುತ್ತ ಮುತ್ತ ಹಚ್ಚ ಹಸಿರಿನಿಂದ ಕೂಡಿದ್ದು, ಬೆಟ್ಟಗಳಿಂದ ತುಂಬಿದೆ ಮತ್ತು ಸಮೀಪದಲ್ಲಿ ಕೆರೆಯ ಸುಂದರ ನೋಟವೂ ಇದೆ. ಇದು ಅಲ್ಲಿ ಭೇಟಿ ನೀಡುವ ಜನತೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.